ಇಂಡಿಯನ್ ಮ್ಯೂಸಿಯಂ
ಕಲ್ಕತ್ತದಲ್ಲಿರುವ ವಸ್ತುಸಂಗ್ರಹಾಲಯ. 1814ರಲ್ಲಿ ಏಷ್ಯಾಟಿಕ್ ಸೊಸೈಟಿಯ ವತಿಯಿಂದ ಸ್ಥಾಪಿತವಾದ ಈ ಸಂಸ್ಥೆ ದಿನ ದಿನಕ್ಕೆ ತನ್ನ ಸಂಗ್ರಹವನ್ನು ಬೆಳೆಸಿಕೊಂಡು ಈಗ ಭಾರತದಲ್ಲೇ ಅತಿ ದೊಡ್ಡ ವಸ್ತು ಸಂಗ್ರಹಾಲಯವೆಂದು ಲೋಕಪ್ರಸಿದ್ಧವಾಗಿದೆ. ಇದರಲ್ಲಿ ಕೈಗಾರಿಕೆ, ಅರ್ಥವ್ಯವಸ್ಥೆ, ಮಾನವಶಾಸ್ತ್ರ, ಪುರಾತತ್ವ, ಕಲೆ, ಭೂಗರ್ಭಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರಗಳಿಗೆ ಮೀಸಲಾದ ಆರು ವಿಭಾಗಗಳಿವೆ. ಮಾನವಶಾಸ್ತ್ರ ವಿಭಾಗದಲ್ಲಿ ಅಂಡಮಾನ್, ನಿಕೋಬಾರ್ ಮತ್ತು ಅಸ್ಸಾಂ ಪ್ರದೇಶಗಳ ಗಿರಿಜನರ ಜೀವನ ವಿಧಾನವನ್ನು ನಿರೂಪಿಸುವ ಚಿತ್ರಗಳು, ಬೊಂಬೆಗಳು ಮತ್ತು ವಸ್ತುಗಳು ಭಾರತದಲ್ಲಿ ಉಪಯೋಗದಲ್ಲಿರುವ ವಿವಿಧ ರೀತಿಯ ವಾದ್ಯಗಳು ಅನೇಕ ರೀತಿಯ ಜೀವನ ಸಲಕರಣೆಗಳಿಗೂ ಸಂಗ್ರಹಗೊಂಡಿವೆ. ಪುರಾತತ್ವ ವಿಭಾಗದಲ್ಲಿ ಭಾರತದ ಬೇರೆ ಬೇರೆ ಕಾಲಗಳಿಗೆ ಸಂಬಂಧಿಸಿದ ಉತ್ಖನನಗಳಲ್ಲಿ ದೊರೆತ ವಸ್ತುಗಳು, ಶಿಲ್ಪಗಳು, ನಾಣ್ಯಗಳು, ಶಿಲಾ ಮತ್ತು ತಾಮ್ರಲೇಖಗಳು ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿವೆ. ಇವುಗಳ ಪೈಕಿ ಬಾರ್ಹುತ್ ಸ್ತೂಪದ ಅವಶೇಷಗಳು ಪ್ರಸಿದ್ಧವಾದುವು. ಕೈಗಾರಿಕಾ ವಿಭಾಗದಲ್ಲಿ ಕೈಗಾರಿಕೆಗಳಿಗೆ ಉಪಯುಕ್ತವಾದ ವ್ಯವಸಾಯ. ಅರಣ್ಯ ಉತ್ಪನ್ನಗಳೂ ಪ್ರಾಣಿಶಾಸ್ತ್ರ ವಿಭಾಗದಲ್ಲಿ ವಿವಿಧ ವರ್ಗಗಳ ಪ್ರಾಣಿರೂಪಗಳೂ ಭೂಗರ್ಭಶಾಸ್ತ್ರ ವಿಭಾಗದಲ್ಲಿ ನಾನಾರೀತಿಯ ಕಲ್ಲುಗಳೂ, ಅದುರುಗಳೂ, ಪುರಾತನ ಜೀವಿಗಳ ಪಳೆಯುಳಿಕೆಗಳೂ ಪ್ರದರ್ಶಿತವಾಗಿವೆ. ಕಲಾತ್ಮಕ ಜವಳಿಗಳು, ಪರ್ಷಿಯ, ಟಿಬೆಟ್ ಮುಂತಾದೆಡೆಯ ಕಂಬಳಿಗಳು, ಕಂಚಿನ ವಿಗ್ರಹಗಳು ಮತ್ತು ಚಿತ್ರಗಳು ಕಲಾವಿಭಾಗದಲ್ಲಿವೆ. ಇವೆಲ್ಲವೂ ಸಾರ್ವಜನಿಕ e್ಞÁನವರ್ಧನೆಗಾಗಿ ಸಾಕಷ್ಟು ಮಾಹಿತಿಯೊಡನೆ ಪ್ರದರ್ಶಿತವಾಗಿವೆ. ಇಷ್ಟಲ್ಲದೆ ವಿದ್ವಾಂಸರಿಗೆ ಉಪಯುಕ್ತವಾಗುವಂತೆ ಹಲವು ಪ್ರಕಟನೆಗಳನ್ನೂ ಈ ಸಂಸ್ಥೆ ಆಗಾಗ್ಗೆ ಹೊರತರುತ್ತದೆ.						
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ